ದಲಿತರ ಸ್ಮಶಾನ ನೆಲಸಮ ಮಾಡಿದ ಆರೋಪ. ಸ್ಮಶಾನಕ್ಕಾಗಿ ಪ್ರತಿಭಟನೆ….

Spread the love

ದೊಡ್ಡಬಳ್ಳಾಪುರ: ಆ ಗ್ರಾಮದ ದಲಿತ ಕುಟುಂಬಗಳು ಊರಿನ ಹೊರವಲಯದ ಜಾಗವೊಂದರಲ್ಲಿ ಹಲವು ವರ್ಷಗಳಿಂದ ಸತ್ತರೆ ಅಂತ್ಯಕ್ರಿಯೆ ಮಾಡ್ತಿದ್ದರು. ಆದ್ರೆ ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗವನ್ನ ರಾತ್ರೋರಾತ್ರಿ ನಾಶ ಮಾಡಲಾಗಿದೆ. ಗ್ರಾಮಸ್ಥನೊಬ್ಬ ಇದು ನಮ್ಮ ಜಾಗ ಅಂತಾ ದಲಿತರು ಅಂತ್ಯಕ್ರಿಯೆ ಮಾಡುತ್ತಿದ್ದ ಜಾಗದ ಸಮಾಧಿಗಳನ್ನ ಡೆಮೋಲಿಷ್ ಮಾಡಿ ನಾಶ ಮಾಡಿದ್ದು ದಲಿತ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ. ದಲಿತರು ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನದಲ್ಲಿ ರಾತ್ರೋರಾತ್ರಿ ಮಾಯವಾಗಿರೋ ಸಮಾಧಿಗಳು. ಸಮಾಧಿ ಗುಡಿಗಳ ಕಲ್ಲುಗಳನ್ನ ತೋರಿಸಿಕೊಂಡು ಅಳಲನ್ನ ತೋಡಿಕೊಳ್ತಿರೋ ದಲಿತ ಕುಟುಂಬಗಳು.ಹೌದು ದಲಿತರ ಸ್ಮಶಾನವನ್ನ ರಾತ್ರೋರಾತ್ರಿ ಗ್ರಾಮಸ್ಥನೊಬ್ಬ ನಾಶ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಮೇಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಂದಹಾಗೆ ಗ್ರಾಮದ ಸರ್ವೆ.ನಂ 1/1 ರಲ್ಲಿ ದಲಿತ ಕುಟುಂಬಗಳು ನೂರಾರು ವರ್ಷಗಳಿಂದ ತಮ್ಮ ಮನೆತನದ ಹಿರಿಯರು ಸತ್ತರೆ ಇಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಿದ್ದರಂತೆ. ಸುಮಾರು 250 ರಿಂದ 300 ಸಮಾಧಿ ಗುಡಿಗಳು ಇಲ್ಲಿ ಇದ್ದು, ಇದೀಗ ರಾತ್ರೋರಾತ್ರಿ ಗ್ರಾಮಸ್ಥನೊಬ್ಬ ತನಗೆ ಜಾಗ ಸೇರಬೇಕೆಂದು ಸ್ಮಶಾನವನ್ನ ನಾಶ ಮಾಡಿದ್ದಾನಂತೆ. ಹೀಗಾಗಿ ನಾಶವಾಗಿರೋ ಸ್ಮಶಾನದ ಸಮಾಧಿ ಕಲ್ಲುಗಳನ್ನ ಹಿಡಿದುಕೊಂಡು ದಲಿತ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹಿರಿಯರ ಸಮಾಧಿಗಳನ್ನ ಹಾಳು ಮಾಡಿದ್ರಲ್ಲ ಅಂತಾ ಕಣ್ಣಿರು ಹಾಕಿದ್ದಾರೆ.
ಅಂದಹಾಗೆ ಹಿಂದಿನಿಂದಲೂ ಇದೇ ಜಾಗದಲ್ಲಿ ದಲಿತ ಕುಟುಂಬಗಳು ತಮ್ಮವರು ಸತ್ತರೇ ಅಂತ್ಯಕ್ರಿಯೆ ಮಾಡಿಕೊಂಡು ಸಮಾಧಿಗಳನ್ನ ಮಾಡುತ್ತಿದ್ದರಂತೆ. ಆದ್ರೆ ಗ್ರಾಮದ ಮಲ್ಲಿಕಾರ್ಜುನಪ್ಪ ಹಾಗೂ ಲೋಕೇಶ್ ಎನ್ನುವವರು ಈ ಜಾಗ ನಮಗೆ ಸೇರಬೇಕೆಂದು ತಾಲೂಕು ಕಚೇರಿಗೆ ಅರ್ಜಿ ಹಾಕಿಕೊಂಡು ಇದೀಗ ಬೆಳಗ್ಗೆಯಾಗೋದ್ರಲ್ಲಿ ಸಮಾಧಿಗಳನ್ನ ನಾಶ ಮಾಡಿರೋ ಆರೋಪ ಕೇಳಿ ಬಂದಿದೆ. ಇನ್ನೂ ಇದೀಗ ಇದ್ದ ಸಮಾಧಿಗಳು ಕಾಣಿಸದೇ ಗ್ರಾಮದ ದಲಿತ ಕುಟುಂಬಗಳು ನಾಶ ಮಾಡಿರೋ ಗ್ರಾಮದ ಪ್ರಭಾವಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಬೇರೆಕಡೆ ದಲಿತರ ಅಂತ್ಯಕ್ರಿಯೆಗೆ ಜಾಗವಿಲ್ಲ. ಇದ್ದ ಜಾಗವನ್ನ ನಾಶ ಮಾಡಿದ್ದು ಎಷ್ಟು ಸರಿ ಅಂತಾ ಗರಂ ಹಾಗಿದ್ದಾರೆ. ಇನ್ನೂ ಈ ಬಗ್ಗೆ ಸ್ಮಶಾನ ನಾಶ ಮಾಡಿದ ಆರೋಪ ಹೊತ್ತಿರೋ ಮಲ್ಲಿಕಾರ್ಜುನಪ್ಪರನ್ನ ಕೇಳಿದ್ರೆ ಇದು ನಮ್ಮ ಜಮೀನಾಗಿದ್ದು ಗಿಡಗಂಟೆಗಳು ಬೆಳೆದುಕೊಂಡಿತ್ತು. ಎರಡು ಮೂರು ಸಮಾಧಿಗಳು ಮಾತ್ರವಿದ್ದು, ನಮ್ಮ ಜಾಗದಲ್ಲಿ ಬೆಳೆ ಇಡಲು ನಾವು ಸಮತಟ್ಟು ಮಾಡಿದ್ದೇವೆ ಅಂತಾ ಹೇಳ್ತಿದ್ದಾರೆ.
ಒಟ್ಟಾರೇ ದಲಿತ ಕುಟುಂಬಗಳು ಅಂತ್ಯಕ್ರಿಯೆ ಮಾಡುತ್ತಿದ್ದ ಸ್ಮಶಾನ ಜಾಗ ಇದೀಗ ಸಂಪೂರ್ಣವಾಗಿ ಗ್ರಾಮಸ್ಥನೊಬ್ಬ ನಾಶ ಮಾಡಿ ಜಾಗ ನಮ್ಮದು ಅಂತಾ ಹೇಳುತ್ತಿದ್ದಾನೆ. ಇನ್ನೂ ಅಂತ್ಯಕ್ರಿಯೆ ಮಾಡಲು ಇದೀಗ ದಲಿತ ಕುಟುಂಬಗಳಿಗೆ ಸ್ಮಶಾನ ಜಾಗವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಲಿತ ಕುಟುಂಬಗಳಿಗೆ ಸ್ಮಶಾನ ಒದಗಿಸುವ ಕೆಲಸ ಮಾಡಬೇಕಿದೆ.

Related posts

Leave a Comment